ಬೆನ್ಫೆ, ತಿಯೊಡರ್
1809-81. ಪ್ರಸಿದ್ಧ ಭಾಷಾವಿಜ್ಞಾನಿ. ಜರ್ಮನ್ ಮತ್ತು ಸಂಸ್ಕøತ ಭಾಷೆಗಳಲ್ಲಿ ಹೆಚ್ಚು ಪರಿಣತ. 1809 ಜನವರಿ 28ರಂದು ಪಶ್ಚಿಮ ಜರ್ಮನಿಯ ನ್ಯೋರ್ಟೆನ್ ಎಂಬಲ್ಲಿ ಜನನ. ಗಟಿಂಗೆನ್, ಮ್ಯೂನಿಕ್, ಫ್ರಾಂಕ್‍ಫರ್ಟ್ ಮತ್ತು ಹೈಡಲ್‍ಬರ್ಗ್‍ನಲ್ಲಿ ವಿದ್ಯಾಭ್ಯಾಸ. ಪ್ರಾರಂಭದ ಕೃಷಿ ಸಾಹಿತ್ಯಕ್ಕೆ ಸಂಬಂಧಿಸಿದುದಾದರೂ ಆಮೇಲೆ ತೌಲನಿಕ ಭಾಷಾಶಾಸ್ತ್ರ, ಸಂಸ್ಕøತ ಮತ್ತಿತರ ಭಾಷೆಗಳು ಮತ್ತು ಪುರಾಣಗಳ ಅಧ್ಯಯನಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಂತೆ ಕಾಣುತ್ತದೆ. ಜಾನಪದಕ್ಕೆ ಸಲ್ಲಿಸಿದ ಸೇವೆ ಕೂಡ ಗಮನಾರ್ಹವಾದುದು. ಈತನನ್ನು ಜನಪದ ಕಥೆಗಳ ತೌಲನಿಕ ಅಧ್ಯಯನಕ್ಕೆ ಜನಕ ಎಂದೇ ಕರೆಯಲಾಗಿದೆ. ತೌಲನಿಕ ಜಾನಪದಕ್ಕೆ ಈತನ ಮಹತ್ವದ ಕಾಣಿಕೆಯೆಂದರೆ 1859ರಲ್ಲಿ ಪ್ರಕಟಿಸಿದ ಪಂಚತಂತ್ರದ ಅನುವಾದ. ಇದರ ಪೀಠಿಕೆಯಲ್ಲಿ ಪ್ರಾಚ್ಯ ಮತ್ತು ಪಾಶ್ಚಾತ್ಯ ಸಾಹಿತ್ಯಗಳೆರಡಲ್ಲಿಯೂ ಭಾರತೀಯ ಕಥೆಗಳ ಗತಿಯನ್ನು ಕುರಿತು ವಿವೇಚಿಸಿದ್ದಾನೆ. ಇದರ ಫಲವಾಗಿ ಭಾರತೀಯ ಮೂಲಸಿದ್ಧಾಂತವೊಂದನ್ನು ಸ್ಥಾಪಿಸಿದ. ಜನಪದ ಕಥೆಗಳು ಭಾರತದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಯೂರೊಪಿಗೆ ವಲಸೆ ಹೋಗಿರಬೇಕೆಂದು ಪ್ರತಿಪಾದಿಸಿದ. ಈ ಸಿದ್ಧಾಂತ, ಎಲ್ಲ ಕಥೆಗಳಿಗೂ ಭಾರತ ಮೂಲವನ್ನು ಆರೋಪಿಸುವ ವೈಜ್ಞಾನಿಕ ನಿರರ್ಥಕತೆಯನ್ನು ಗುರುತಿಸುವತನಕ ಅಸ್ತಿತ್ವ ಪಡೆದಿತ್ತು. ಬೆನ್ಫೆಯ ಈ ಸಿದ್ಧಾಂತ ಬಹುಕಾಲ ಉಳಿಯದಿದ್ದರೂ ಈತ ಪಂಚತಂತ್ರದ ಕಥೆಗಳಿಗೆ ನಡೆಸಿರುವ ತೌಲನಿಕ ಅಧ್ಯಯನದ ವಿಧಾನ ಮಾತ್ರ ವಿದ್ವತ್ತಿನ ಜಗತ್ತಿನಲ್ಲಿ ಬಹುಕಾಲ ಉಳಿಯುವಂಥದ್ದು. ಇದಲ್ಲದೆ ಬೆನ್ಫೆ ಎರಡು ಸಂಪುಟಗಳಲ್ಲಿ ಗ್ರೀಕ್ ಧಾತುಗಳನ್ನು ಕುರಿತ ಒಂದು ಕೋಶ (1839-42), ಸೆಮಿಟಿಕ್ ಮತ್ತು ಈಜಿಪ್ಟ್ ಭಾಷೆಗಳ ಭಾಷಿಕ ಸಂಬಂಧವನ್ನು ಕುರಿತ ಅಧ್ಯಯನ (1844) ಸಂಸ್ಕøತ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದಂತೆ ಎರಡು ಪುಸ್ತಕಗಳನ್ನು (1852-54 ಮತ್ತು 1858) ಪ್ರಕಟಿಸಿದ್ದಾನೆ. 

	ಅಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ಸಂಸ್ಕøತ ವ್ಯಾಕರಣ (1863-66) ಮತ್ತು ಸಂಸ್ಕøತ-ಇಂಗ್ಲಿಷ್ ನಿಘಂಟನ್ನು (1866) ಹೊರತಂದಿದ್ದಾನೆ. ಹತ್ತೊಂಬತ್ತನೆಯ ಶತಮಾನದಲ್ಲಿ ಜರ್ಮನಿಯಲ್ಲಿ ನಡೆದ ಭಾಷಾವೈಜ್ಞಾನಿಕ ಸಂಶೋಧನಾ ಇತಿಹಾಸ (1869) ಎಂಬುದು ಈತನ ಪ್ರಮುಖ ಕೃತಿ. 1881 ಜೂನ್ 26 ರಂದು ಗಟಿಂಗೆನ್ನಿನಲ್ಲಿ ನಿಧನನಾದ. 				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ